ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಯಕ್ಷಗಾನಕ್ಕೆ ಪುರಾಣವೇ ತಳಹದಿ, ಅದಿಲ್ಲದೆ ಕಾಲ್ಪನಿಕ ಪ್ರಸಂಗ ಬಾಳದು: ಶ್ರೀಪಾದ ಭಟ್‌

ಲೇಖಕರು : ರಾಜ್‌ಗುರು
ಮ೦ಗಳವಾರ, ಆಗಸ್ಟ್ 12 , 2014

ಪ್ರಶ್ನೆ : ಈಗ ಯಕ್ಷಗಾನದ ಮಟ್ಟುಗಳು, ನಿರೂಪಣೆ ಶೈಲಿ ಎಲ್ಲವೂ ಬದಲಾಗಿದೆ. ಇದನ್ನು ಹೇಗೆ ಸ್ವೀಕರಿಸಿದ್ದೀರಿ?

ಥಂಡಿಮನೆ ಶ್ರೀಪಾದ ಭಟ್‌ : ಕಾಲ ಬದಲಾಗಿದೆ. ಜನರ ಅಭಿರುಚಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ಯಕ್ಷಗಾನ ಕ್ಷೇತ್ರದಲ್ಲೂ ಮಾರ್ಪಾಡುಗಳಾಗಿವೆ. ಹಿಂದೆ ಯಕ್ಷಗಾನ ಪೌರಾಣಿಕ ಪ್ರಸಂಗಗಳನ್ನು ಆಧರಿಸಿತ್ತು. ಈಗ ಜನ ಮನ್ನಣೆ ಪಡೆಯುವುದು, ಪ್ರಚಾರಗಳಿಸುವುದೇ ಮುಖ್ಯ ಅಂತಾಗಿದೆ.

ಥಂಡಿಮನೆ ಶ್ರೀಪಾದ ಭಟ್‌

ಪ್ರಶ್ನೆ : ಹೊಸತನಕ್ಕೆ, ಹೊಸ ಕಾಲಘಟ್ಟಕ್ಕೆ ಹೇಗೆ ಹೊಂದಿ ಕೊಂಡಿದ್ದೀರಿ?

ಥಂಡಿಮನೆ ಶ್ರೀಪಾದ ಭಟ್‌ : ಕಾಲ್ಪನಿಕ ಪ್ರಸಂಗ ಇರಲಿ, ಐತಿಹಾಸಿಕ ಪ್ರಸಂಗ ಇರಲಿ, ಅದಕ್ಕೊಂದು ಪೌರಾಣಿಕ ಚೌಕಟ್ಟು ಇರುತ್ತದೆ. ಏನೇ ಮಾಡಿದರೂ ಮೂಲಸ್ವರೂಪ ಅದೇ. ಕೀರಿಟ ತೊಡಲೇಬೇಕು, ಪ್ಯಾಂಟು ಹಾಕಿಕೊಂಡು ಯಕ್ಷಗಾನ ಮಾಡೋಕೆ ಆಗೋಲ್ಲ. ಪೌರಾಣಿಕ ಚೌಕಟ್ಟಿನಿಂದಾಗಿಯೇ ನಾನು ಯಾವುದೇ ಪ್ರಸಂಗದ ಪಾತ್ರಗಳಿಗೆ ಬಹಳ ಬೇಗ ಹೊಂದಿಕೊಂಡಿದ್ದೇನೆ.

ಪ್ರಶ್ನೆ : ಇವತ್ತು ಯಕ್ಷಗಾನದಲ್ಲಿ ಅಭಿನಯ, ಮಾತಿಗಿಂತ ಕುಣಿತ ಹೆಚ್ಚು. ಅದು ಇಡೀ ಕಲೆಗೆ ಮಾರಕವೋ, ಪ್ರೇರಕವೋ?

ಥಂಡಿಮನೆ ಶ್ರೀಪಾದ ಭಟ್‌ : ಮಾರಕವೇ. ಯಕ್ಷಗಾನ ಸರ್ವಾಂಗೀಣ ಕಲೆ. ಕುಣಿತ, ಅಭಿನಯ, ಮಾತು, ಹಾವಭಾವ, ಪ್ರತ್ಯುತ್ಪನ್ನಮತಿತ್ವ ಸೇರಿ ಆಗುವ ಪರಿಪೂರ್ಣ ಕಲೆ. ಊಟದಲ್ಲಿ ಹೇಗೆ ಎಲ್ಲಾ ರಸ ಮುಖ್ಯವೋ, ಯಾವುದು ಸ್ವಲ್ಪ ಹೆಚ್ಚಾದರೂ ರುಚಿ ಕೆಡುತ್ತದೋ ಯಕ್ಷಗಾನವೂ ಹಾಗೇ. ಈಗ ಜನಕ್ಕೆ ಏನು ಬೇಕೋ ಅದನ್ನು ಕೊಡುವ ಉಮೇದು ಜಾಸ್ತಿಯಾಗಿದೆ. ಇದರಿಂದ ಪಾತ್ರಕ್ಕೆ ಬೇಕಾದ ತಯಾರಿ ಕಡಿಮೆಯಾಗಿದೆ, ಅಭ್ಯಾಸ ಮರೆತು ಹೋಗಿದೆ. ಯಾವುದೋ ಒಂದು ವರ್ಗದ ಜನರನ್ನು ಹಿಡಿಯುವ ಪ್ರಯತ್ನವಾಗಿ ಕುಣಿತಕ್ಕೆ ಪ್ರಾಧಾನ್ಯತೆ ಸಿಕ್ಕಿದೆ.

ಪ್ರಶ್ನೆ : ಯಕ್ಷಗಾನದಂಥ ಸಾಂಪ್ರದಾ ಯಿಕ ಕಲೆಯೊಳಗೆ ಕಾಂಟಪರರಿ ವಿಚಾರಗಳು ತೂರಿಕೊಂಡರೆ ಪಾತ್ರಗಳ ಘನತೆ ಕುಂದುವುದಿಲ್ಲವೇ?

ಥಂಡಿಮನೆ ಶ್ರೀಪಾದ ಭಟ್‌ : ಖಂಡಿತಾ ಕುಂದುತ್ತದೆ. ಯಕ್ಷಗಾನದ ಪರಂಪರೆ ಜಾಡನ್ನು ಹಿಡಿದು ನಡೆಯುವ ಕಲಾವಿದನಿಗೆ ಇದು ಮಾರಕ. ಮೊದಲೆಲ್ಲ ಪಾತ್ರ ಚಿತ್ರಣ ಮಾಡುವಾಗ ಮಹಾಭಾರತ, ರಾಮಾಯಣ ಓದುತ್ತಿದ್ದರು. ಇದರಿಂದ ಸಾಹಿತ್ಯವರ್ಧನೆಯಾಗುತ್ತಿತ್ತು, ಪಾತ್ರಕ್ಕೆ ಘನತೆ ಸಿಗುತ್ತಿತ್ತು. ಈಗ ಫೇಸ್‌ಬುಕ್‌ ನೋಡಿ, ಪೇಪರ್‌ ಓದಿ ಸಂಭಾಷಣೆ ಹೆಣೆಯೋದು, ಇದರ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳನ್ನು ಸಂಭಾಷಣೆಯಾಗಿ ತರೋದು. ಇದರಿಂದ ಘನತೆಗೆ ಪೆಟ್ಟು ಬೀಳುತ್ತದೆ.

ಪ್ರಶ್ನೆ : ನಿಮಗೀಗ 50 ವರ್ಷ, ರಂಗಕ್ಕೆ ಬಂದು 30 ವರ್ಷ. ಈ ಸಂದರ್ಭದಲ್ಲಿ ಏನನಿಸುತ್ತದೆ?

ಥಂಡಿಮನೆ ಶ್ರೀಪಾದ ಭಟ್‌ : ಖುಷಿಯಾಗುತ್ತಿದೆ. ಇದೆಲ್ಲ ನಾನು 30 ವರ್ಷಗಳ ಕಾಲ ನಿಷ್ಟೆ ಪ್ರಾಮಾಣಿಕತೆಯಿಂದ ರಂಗದಲ್ಲಿ ಇದ್ದದ್ದಕ್ಕೆ ಹಾಗೂ ಯಕ್ಷಗಾನ ಕಲಾಕ್ಷೇತ್ರದ ಮೇಲೆ ಇಟ್ಟ ಶ್ರದ್ದೆಯ ಫ‌ಲಿತಾಂಶವೇ ಆಗಿದೆ.

ಪ್ರಶ್ನೆ : ಹೊಸದಾಗಿ ಯಕ್ಷ ಗಾನಕ್ಕೆ ಬರುತ್ತಿರುವವರಿಗೆ ಏಕಾಗ್ರತೆ, ಶಿಸ್ತು, ಸಂಯಮ ಇದೆಯಾ?

ಥಂಡಿಮನೆ ಶ್ರೀಪಾದ ಭಟ್‌ : ಯಕ್ಷಗಾನಕ್ಕೆ ಇನ್ನೆಷ್ಟೇ ವರ್ಷ ಕಳೆದರೂ ಅಳಿವಿಲ್ಲ. ಆದರೆ ಈಗ ಯಕ್ಷಗಾನಕ್ಕೆ ಬರುವವರಿಗೆ ಅದು ಗೀಳು ಮಾತ್ರ. ಇವರ ಪಾಲಿಗೆ ಭಾಗವತ ಅಂದರೆ ಏರು ಸ್ವರದಲ್ಲಿ ಹಾಡೋನು. ಅದಕ್ಕಾಗಿ ಅಧ್ಯಯನ ಮಾಡೋಲ್ಲ.

ನಾಲ್ಕು, ಆರು ವರ್ಷಗಳ ಕಾಲ ಹಿರಿಯ ಕಲಾವಿದರಿಂದ ಪಾಠ ಮಾಡಿ, ತರಬೇತಿ ಪಡೆದು ಯಕ್ಷಗಾನಕ್ಕೆ ಬರುವ ಸಂಪ್ರದಾಯ ಈಗಿಲ್ಲ. ಈಗೇನಿದ್ದರೂ ಮೂರು ತಿಂಗಳು ಅಭ್ಯಾಸ ಮಾಡಿ, ಒಂದು ಕಥೆಯಲ್ಲಿ ಹೀರೋ ಆದರೆ ಸಾಕು.

ಪ್ರಶ್ನೆ : ಮುಂದಿನ ಜನಾಂಗಕ್ಕೆ ದಾಟುತ್ತಿದೆಯಾ?

ಥಂಡಿಮನೆ ಶ್ರೀಪಾದ ಭಟ್‌ : ದಾಟುತ್ತಿದೆ. ಯಕ್ಷಗಾನ ಗಂಡು ಕಲೆ ಅನ್ನೋದೇನೋ ನಿಜ. ಆದರೆ ಇತ್ತೀಚೆಗೆ ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಉತ್ತರ ಕನ್ನಡದ ಪ್ರತಿ ಊರಿನಲ್ಲಿ ತಂಡ ಕಾಣಿಸುತ್ತಿದೆ. ಉದ್ಯೋಗದಲ್ಲಿರುವ ಆಸಕ್ತರು ಮಕ್ಕಳಿಗೆ ಯಕ್ಷಗಾನ ತೋರಿಸೋದು. ಕುಣಿತ ಹೇಳಿಕೊಡೋದು ಮಾಡುತ್ತಿದಾರೆ. ಯಕ್ಷಗಾನ ಪಠ್ಯಕ್ರಮವಾದರೆ ಮುಂದಿನ ತಲೆಮಾರಿಗೆ ಸುಲಭವಾಗಿ ಹಸ್ತಾಂತರಗೊಳ್ಳುತ್ತದೆ.

ಕೃಪೆ : https://udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ